‘ಬೌದ್ಧಿಕ ಬೆಳವಣಿಗೆಯೊಂದಿಗೆ ದೈಹಿಕ ಬೆಳವಣಿಗೆಯೂ ಆಗಬೇಕು. ಅದಕ್ಕೆ ಪಾಠದ ಜೊತೆ ಆಟವೂ ಅಗತ್ಯ’ ಎಂದು ದ. ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀ ವಾಲ್ಟರ್ ಡಿ’ ಮೆಲ್ಲೊ ಹೇಳಿದರು. ಅವರು ವಾಮಂಜೂರಿನ ಅನುದಾನಿತ ಸೈಂಟ್ ರೇಮಂಡ್ಸ್ ಪ್ರೌಢಶಾಲಾ ವಾರ್ಷಿಕ ಕ್ರೀಡಾಕೂಟದ ಮುಖ್ಯ ಅತಿಥಿಯಾಗಿದ್ದು ಪಥಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ಧ್ವಜಾರೋಹಣ ನಿರ್ವಹಿಸಿ ಮಕ್ಕಳನ್ನುದ್ದೇಶಿಸಿ ಮಾತನಾಡಿದರು. ಶಾಲಾ ಸಂಚಾಲಕಿ ಸಿ. ರೋಜ್‍ಲಿಟಾ ಸಮಾರಂಭದ ಅಧ್ಯಕ್ಷತೆ ವಹಿಸಿ ಕ್ರೀಡಾ ಜ್ಯೋತಿ ಬೆಳಗಿಸಿ ಮಾತನಾಡಿ ಕ್ರೀಡಾಪಟುಗಳಿಗೆ ಶುಭಕೋರಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಮಾರ್ಗರೆಟ್ ಡಿ’ ಸೋಜಾ ಹಾಗೂ ಸೈಂಟ್ ರೇಮಂಡ್ ಸಹ ಸಂಸ್ಥೆಗಳ ಮುಖ್ಯಸ್ಥರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿ. ವಿನ್‍ಜೊಯ್ ಸರ್ವರನ್ನೂ ಸ್ವಾಗತಿಸಿದರು. ಶಿಕ್ಷಕಿ ಐಡಾ ಪಿರೇರಾ ವಂದಿಸಿದರು. ಶಿಕ್ಷಕ ವಿನ್ಸೆಂಟ್ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಡೊನಾಲ್ಡ್ ಲೋಬೋ ಮಾರ್ಗದರ್ಶನದಲ್ಲಿ ವಿವಿಧ ಆಟೋಟಗಳು ನಡೆದವು.
ರಿಚ್ಚರ್ಡ್ ಅಲ್ವಾರಿಸ್
ಶಿಕ್ಷಕರು