ಲಿಟ್ಲ್ ಫ್ಲವರ್ ಪ್ರೌಢಶಾಲೆ ಕಿನ್ನಿಗೋಳಿ ಇದರ ಅಮೃತ ಮಹೋತ್ಸವ ಸಮಾರೋಪ ಸಮಾರಂಭ ಕಾರ್ಯಕ್ರಮವು ದಿನಾಂಕ 08-12-2016 ರ ಪೂರ್ವಾಹ್ನ ಕಿನ್ನಿಗೋಳಿಯ ಕೊಸೆಸಾಂವ್ ಅಮ್ಮನವರ ಚರ್ಚಿನಲ್ಲಿ ಬಲಿಪೂಜೆಯೊಂದಿಗೆ ಆರಂಭವಾಯಿತು. ಬಲಿ ಪೂಜೆಯ ಪ್ರಧಾನ ಅರ್ಚಕರಾದ ವಂದನೀಯ ಫಾ| ವಿನ್ಸೆಂಟ್ ಮೊಂತೇರೋ ತಮ್ಮ ಪ್ರಸ್ತಾವನೆಯಲ್ಲಿ “ಲಿಟ್ಲ್ ಫ್ಲವರ್ ಪ್ರೌಢ ಶಾಲೆಗೆ 75 ವರ್ಷಗಳು ಸಂದವು. ದೇವರ ಸೇವಕ ಆರ್.ಎಫ್.ಸಿ ಮಸ್ಕರೇನ್ಹಸರು ಅಂದು ಈ ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸಿದ ಶಾಲೆ ಇದೀಗ ಅಮೃತ ಮಹೋತ್ಸವ ಆಚರಿಸುತ್ತಿದೆ. ಇದೊಂದು ವಿಸ್ಮಯ ಹೆಣ್ಣು ಮಕ್ಕಳಿಗಾಗಿ ಸ್ಥಾಪಿಸಿದ ಈ ಶಾಲೆಯಲ್ಲಿ ಹಲವು ಸಾವಿರ ವಿದ್ಯಾರ್ಥಿನಿಯರು ಶಿಕ್ಷಣ ಪಡೆದು ನಾಡಿನೆಲ್ಲೆಡೆ ದೇಶ ವಿದೇಶಗಳಲ್ಲಿ ಪಸರಿಸಿ ಕೀರ್ತಿವಂತರಾಗಿದ್ದಾರೆ. ಈ ಮೂಲಕ ಕಿನ್ನಿಗೋಳಿ ಎಂಬ ಪುಟ್ಟ ಪ್ರದೇಶವು ವಿವಿಧ ಕ್ಷೇತ್ರಗಳಲ್ಲಿ ಪ್ರಮುಖ ಸಾಧನೆ ಗೈದು ಭಾರತದ ಭೂಪಟದಲ್ಲಿ ಎದ್ದು ಕಾಣುವಂತಾಗಿದೆ. ಒಂದು ವೇಳೆ ಇಂತಹ ಶಿಕ್ಷಣ ಕ್ರಾಂತಿ ಅಂದು ಆಗದಿರುತ್ತಿದ್ದಲ್ಲಿ ಕಿನ್ನಿಗೋಳಿಯ ಇಂದಿನ ಈ ಅಭಿವೃದ್ಧಿ ಸಾಧ್ಯವಾಗುತ್ತಿರಲಿಲ್ಲ ಎಂದು ಉದ್ಗರಿಸಿದರು’’ ಈ ಕೀರ್ತಿಗೆ ಕಾರಣಕರ್ತರಾದ ಬೆಥನಿ ಸಂಸ್ಥೆಗೆ ಶಾಲೆಯ ಹಳೆ ವಿದ್ಯಾರ್ಥಿಗಳಿಗೆ ಹಾಗೂ ಪ್ರಸ್ತುತ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು.
ಪೂಜೆಯ ಪ್ರಮುಖ ವಿಧಿ ವಿಧಾನಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು ಪಾಲ್ಗೊಂಡು ಈ ಮೂಲಕ ಕೋರಿಕೆಯ ಪ್ರಾರ್ಥನೆಯನ್ನು ಸಲ್ಲಿಸಿ ಭಗವಂತನಿಗೆ ಕೃತಜ್ಞತೆ ಸಲ್ಲಿಸಿದರು. ಈ ಬಲಿಪೂಜೆಯಲ್ಲಿ ಮೇರಿವೆಲ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಲಿಟ್ಲ್ ಫ್ಲವರ್ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಆಮಂತ್ರಿತರು ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸಿರುವುದು ದಾಖಲೆಯೇ ಸರಿ.
ಧ್ವಜಾರೋಹಣ ಹಾಗೂ ಪ್ರತಿಭಾ ಪುರಸ್ಕಾರ
ದಿನಾಂಕ 09-12-2016 ಶುಕ್ರವಾರ ಶಾಲಾ ಆವರಣದಲ್ಲಿ ಪೂರ್ವಾಹ್ನ 9.30 ಕ್ಕೆ ಸರಿಯಾಗಿ ಪ್ರೌಢ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಧ್ವಜಾರೋಹಣ ಕಾರ್ಯಕ್ರಮವು ವಾದ್ಯ ತಂಡದ ಧ್ವಜ ವಂದನೆಯ ಘೋಷದೊಂದಿಗೆ ವಿದ್ಯುಕ್ತವಾಗಿ ಆರಂಭವಾಯಿತು. ಅಧ್ಯಕ್ಷತೆಯನ್ನು ವಹಿಸಿದ ವಂ. ಭಗಿನಿ ಮಾರಿಯೋಲಾ ಬಿ.ಎಸ್. ಇವರ ದಿವ್ಯ ಹಸ್ತದೊಂದಿಗೆ ಶಾಲೆಯ ಧ್ವಜ ಆರೋಹಣ ಗೈಯಲಾಯಿತು. ಊರಿನ ಗಣ್ಯರಾದ ಶ್ರೀ ದೀಪಕ್ ರೋಡ್ರಿಗಸ್, ಶ್ರೀ ಫೆಡ್ರಿಕ್ ಲೋಬೋ, ಸಿ.ಆರ್.ಪಿ ಶ್ರೀ ಜಗದೀಶ್ ನಾವಡ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಶ್ರೀಮತಿ ಶೈಲಾ ಸಿಕ್ವೇರಾ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರು ಶ್ರೀ ರಮೇಶ್ ದೇವಾಡಿಗ ಹಾಗೂ ಮೇರಿವೆಲ್ ಕಾನ್ವೆಂಟ್‍ನ ಮುಖ್ಯಸ್ಥೆ ಭಗಿನಿ ವಿತಾಲಿಸ್, ಶಾಲಾ ಸಂಚಾಲಕಿ, ಮುಖ್ಯೋಪಾಧ್ಯಾಯರು, ಶಿಕ್ಷಕರು ಜೊತೆಗೂಡಿ ಧ್ವಜ ವಂದನೆ ಸಲ್ಲಿಸುತ್ತಾ ಧ್ವಜರೋಹಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರತಿಭಾವಂತರಿಗೆ ಬಹುಮಾನವನ್ನು ವಿತರಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ದೀಪಕ್ ರೊಡ್ರೀಗಸ್ ತಮ್ಮ ಅನಿಸಿಕೆಯಲ್ಲಿ ಬೆಥನಿ ಸಂಸ್ಥೆಯ ಹಲವು ಸೇವಾಕಾರ್ಯಗಳನ್ನು ಕೊಂಡಾಡಿದರು. ಮತ್ತು ತಮ್ಮ ಅಮ್ಮ ಈ ಶಾಲೆಯಲ್ಲಿ ಕಲಿತಿರುವುದನ್ನು ಸ್ಮರಿಸಿಕೊಂಡರು.
ಸಮಾರೋಪ ಸಮಾರಂಭ
ದಿನಾಂಕ 10-12-2016 ರಂದು ಸಾಯಂಕಾಲ 5.30 ಕ್ಕೆ ಸರಿಯಾಗಿ ಕಾರ್ಯಕ್ರಮದ ಅಧ್ಯಕ್ಷರಾದ ಬೆಥನಿ ಮಹಾಮಾತೆ ವಂ. ಭಗಿನಿ ರೋಸ್ ಸೆಲಿನ್ ಇವರ ಸಮ್ಮುಖದಲ್ಲಿ ಆಗಮಿಸಿದ ಎಲ್ಲಾ ಆಹ್ವಾನಿತ ಗಣ್ಯರು ಜೊತೆಸೇರಿ, ಪ್ರಾಂತ್ಯಾಧಿಕಾರಿಣಿ ಹಾಗೂ ಕಾರ್ಪೊರೇಟ್ ಮ್ಯಾನೇಜರ್ ಆಗಿರುವ ವಂ.ಭಗಿನಿ ಸಿಸಿಲಿಯಾ ಮೆಂಡೋನ್ಸಾರವರು ಶಾಲಾ ಸಂಸ್ಥಾಪಕರ ಹಾಗೂ ಶಾಲಾ ಪಾಲಕಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುತ್ತಾ ವಾದ್ಯ ಘೋಷದೊಂದಿಗೆ ಭವ್ಯ ಮೆರವಣಿಗೆಯನ್ನು ಆರಂಭಿಸಲಾಯಿತು. ಶಾಲಾ ಆವರಣದಿಂದ ಹೊರಟ ಈ ಮೆರವಣಿಗೆಯಲ್ಲಿ ಮೇರಿವೆಲ್ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ವಾದ್ಯ ತಂಡವು ನೇತೃತ್ವವನ್ನು ವಹಿಸಿತ್ತು. ಅದರೊಂದಿಗೆ ರೇಮಂಡ್ ಗುರುಗಳು, ಶಾಲಾ ಪಾಲಕಿ ಸಂತ ತೇರೇಜಮ್ಮ, ಮಾತೆ ಮರಿಯಮ್ಮ, ಹಾಗೂ ಏಸುಕ್ರಿಸ್ತರ ವೇಷಧಾರಿಗಳು, 75 ಪೂರ್ಣಕುಂಭಗಳನ್ನು ಹಿಡಿದ ವಿದ್ಯಾರ್ಥಿನಿಯರು, ನೃತ್ಯ ನಾಟಕದಲ್ಲಿ ಭಾಗವಹಿಸಿದ 5 ಶಾಲೆಗಳ 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಂಗು ರಂಗಿನ ಉಡುಗೆ ತೊಡುಗೆಗಳೊಂದಿಗೆ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡರು. ಇದರಲ್ಲಿ ಲಿಟ್ಲ್ ಫ್ಲವರ್ ವಾದ್ಯ ತಂಡವೂ ಜೊತೆ ಸೇರಿತ್ತು.
ಈ ಆಕರ್ಷಣೀಯ ಮೆರವಣಿಗೆ ಶಾಲಾ ಮೈದಾನದಲ್ಲಿ ವೇದಿಕೆಯವರೆಗೆ ಸಾಗಿ ವಿರಮಿಸಿತು. ಹೋಲಿ ಫ್ಯಾಮಿಲಿ ಬಜ್ಪೆ ಪ್ರೌಢ ಶಾಲೆಯ ವಿದ್ಯಾರ್ಥಿನಿಯರ ಪ್ರಾರ್ಥನಾ ಗೀತೆ ಹಾಗೂ ರಾಷ್ಟ್ರಗೀತೆಯೊಂದಿಗೆ ಸಭಾಕಾರ್ಯಕ್ರಮವು ಆರಂಭಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೆಥನಿ ಮಹಾಮಾತೆ ವಂ. ಭಗಿನಿ ರೋಸ್ ಸೆಲಿನ್, ಸಹಾಯಕ ಮಹಾಮಾತೆ ವಂ.ಭಗಿನಿ ಲಿಲ್ಲಿಸ್, ಪ್ರಾಂತ್ಯಾಧಿಕಾರಿಣಿ ವಂ.ಭಗಿನಿ ಸಿಸಿಲಿಯ ಮೆಂಡೋನ್ಸಾ, ಚರ್ಚಿನ ಧರ್ಮಗುರುಗಳಾದ ವಂ.ಫಾ.ವಿನ್ಸೆಂಟ್ ಮೊಂತೆರೋ ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದ ಸರ್ವ ಗಣ್ಯರನ್ನು ಶಾಲಾ ಸಂಚಾಲಕಿ ಭಗಿನಿ ಡಿವೀನಾ ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಈ ವರೆಗೆ ದುಡಿದ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಸಂಚಾಲಕಿ ಭಗಿನಿಯರಿಗೆ, ಮಹಾದಾನಿ ಸಮಾಜ ಸೇವಕ ಶ್ರೀ ಎಡ್ಮಂಡ್ ಫ್ರಾಂಕ್, ಶಾಲಾ ಹಳೆ ವಿದ್ಯಾರ್ಥಿನಿ U.P.S.ಅ ಪರೀಕ್ಷೆಯಲ್ಲಿ ರ್ಯಾಂಕ್ ವಿಜೇತೆ ಕುಮಾರಿ ಮಿಶಲ್ ಕ್ವೀನಿ ಡಿ ಕೋಸ್ತಾ, ಶಾಲಾ ಹಿತೈಷಿಗಳಾದ ಶ್ರೀ ಬಾಲಕೃಷ್ಣ ಉಡುಪ, ಶ್ರೀ ರುಡಾಲ್ಫ್ ಫೆರ್ನಾಂಡಿಸ್, ಅಮೃತ ಮಹೋತ್ಸವ ಕಾರ್ಯಕ್ರಮದ ರೂವಾರಿಗಳಾದ ಮುಖ್ಯ ಶಿಕ್ಷಕಿ ಭಗಿನಿ ಲೀರಾ ಮರಿಯಾ, ಶಾಲಾ ಸಂಚಾಲಕಿ - ಭಗಿನಿ ಡಿವೀನಾ ಹಾಗೂ ಅಮ್ಮ ನೃತ್ಯ ನಾಟಕದ ನಿರ್ದೇಶಕರಾದ ಶ್ರೀ ಹಿಲರಿ ಮಸ್ಕರೇನ್ಹಸ್‍ರನ್ನು ಗಣ್ಯರ ಸಮ್ಮುಖದಲ್ಲಿ ಹಂತ ಹಂತಗಳಲ್ಲಿ ಸನ್ಮಾನಿಸಲಾಯಿತು.
ಸಾಂಸ್ಕøತಿಕ ಕಾರ್ಯಕ್ರಮವು ಹೋಲಿ ಫ್ಯಾಮಿಲಿ ಬಜ್ಪೆ ವಿದ್ಯಾರ್ಥಿನಿಯರ ಸ್ವಾಗತ ನೃತ್ಯದೊಂದಿಗೆ ಆರಂಭಗೊಂಡಿತು. 5 ವಿವಿಧ ಶಾಲೆಗಳ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ ಅಮ್ಮ ನೃತ್ಯ ನಾಟಕವು ಪ್ರೇಕ್ಷಕರ ಮನಸೂರೆಗೊಂಡಿತು. ಈ ಕಾರ್ಯಕ್ರಮವನ್ನು ವೀಕ್ಷಿಸಲು ಅತ್ಯಧಿಕ ಸಂಖ್ಯೆಯಲ್ಲಿ ಸೇರಿದ ಜನಸ್ತೋಮ ಬಿಂದು ಅವಿಸ್ಮರಣೀಯ ಇತಿಹಾಸವಾಗಿ ದಾಖಲಾಯಿತು.
ಅಲ್ಲದೆ 5 ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಜೊತೆ ಸೇರಿಸಿ ನಡೆಸಿದ ಈ ಅಮೃತ ಮಹೋತ್ಸವ ಕಾರ್ಯಕ್ರಮವು ವಿನೂತನ ಹಾಗೂ ಪ್ರಪ್ರಥಮ ಪ್ರಯೋಗವಾಗಿತ್ತು. ಇದಕ್ಕೆ ಕಾರಣೀಕರ್ತರಾದ ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಲೀರಾ ಮರಿಯಾ, ಮಾರ್ಗದರ್ಶನ ನೀಡಿದ ಭಗಿನಿ ಡಿವೀನಾ ಬಿ.ಎಸ್ ಅನುಭವಿ ಹಾಗೂ ಹಿರಿಯ ಶಿಕ್ಷಕರಾದ ಶ್ರೀ ಹಿಲರಿ ಮಸ್ಕರೇನ್ಹಸ್ ರವರ ವ್ಯವಸ್ಥಿತ ಕ್ರಿಯಾಯೋಜನೆ ಹಾಗೂ ಪ್ರೌಢ, ಪ್ರಾಥಮಿಕ ಶಾಲೆಯ ಎಲ್ಲ ಶಿಕ್ಷಕರ ಸಹಕಾರ ಅಮೃತಮಹೋತ್ಸವ ಕಾರ್ಯಕ್ರಮದ ಯಶಸ್ಸಿನ ಗುಟ್ಟಾಗಿತ್ತು. ಈ ಯಶಸ್ವೀ ಕಾರ್ಯಕ್ರಮಕ್ಕೆ ಕೈ ಜೋಡಿಸಿದ ಹಳೆವಿದ್ಯಾರ್ಥಿ ಸಂಘ, ಶಾಲಾ ಹಿತೈಷಿಗಳು, ಊರಿನ ಗಣ್ಯರು, ಕೊಡುಗೈ ದಾನಿಗಳು ಹಾಗೂ ಬೆಥನಿ ಸಂಸ್ಥೆಯ 5 ಶಾಲೆಯ ಮುಖ್ಯಸ್ಥರಿಗೆ ಕೃತಜ್ಞತೆಗಳು.